ತನಿಖೆಗೆ ಹೆದರಿ ಓಡಿ ಹೋಗುವವರಲ್ಲ ? BHN
ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ),  ನ್ಯಾಷನಲ್‌ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್‌ ಘಟಕದ ವತಿಯಿಂದ ರಾಜಭವನ ಚಲೋಗೂ ಮೊದಲು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಯಿತು. 

ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸೋನಿಯಾ ಗಾಂಧಿ ಅವರ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್‌ ನಾಯಕರು ಆರೋಪಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, 'ಬಿಜೆಪಿಯವರು ಹೇಡಿಗಳು. ನಮ್ಮ ನಾಯಕರನ್ನು ಗುರಿ ಮಾಡುತ್ತಿದ್ದಾರೆ. ಧೀಮಂತ ಮಹಿಳೆಗೆ ಕಿರುಕುಳ ಕೊಡುತ್ತಿದ್ದಾರೆ. ಮೋದಿ, ಅಮಿತ್ ಶಾ ಅವರ ಧಮ್ಕಿಗೆ ಹೆದರುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಮುಟ್ಟಿದರೆ ಕೇಂದ್ರ ಸರ್ಕಾರ ಚೂರು ಚೂರಾಗಲಿದೆ' ಎಂದು ಎಚ್ಚರಿಕೆ ನೀಡಿದರು.

ವೀರಪ್ಪ ಮೊಯಿಲಿ ಮಾತನಾಡಿ, 'ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ರಾಜಧರ್ಮ ಪಾಲನೆ ಮಾಡಬೇಕೆಂದು ಅಂದು ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಗೆ ವಾಜಪೇಯಿ ಸೂಚಿಸಿದ್ದರು. ಈಗ ನರೇಂದ್ರ ಮೋದಿ ಕೈಯಲ್ಲಿ ದೇಶದ ಆಡಳಿತ ಇದೆ. ಅಮಿತ್ ಶಾ ಗಡಿಪಾರು ಆಗಿದ್ದರು. ಅವರ ಕೈಯಲ್ಲಿ ಗೃಹ ಖಾತೆ ಇದೆ' ಎಂದರು.

'ನ್ಯಾಷನಲ್ ಹೆರಾಲ್ಡ್ ರಾಷ್ಟ್ರೀಯ ಹೋರಾಟದ ಪರಂಪರೆ. ಬ್ರಿಟೀಷರು ಕ್ವಿಟ್ ಇಂಡಿಯಾ ಸಂದರ್ಭದಲ್ಲಿ ನ್ಯಾಷನಲ್ ಹೆರಾಲ್ಡ್‌ನ್ನು ನಿಷೇಧಿಸಿದ್ದರು. ಮೋದಿ, ಶಾ ಯಾವ ಸಾಮ್ರಾಜ್ಯ‌ಶಾಹಿ ನಿರ್ಮಾಣ ಮಾಡಲು ಹೊರಟಿದ್ದಾರೆ? ಇದು ದೇಶದ ಸ್ವಾತಂತ್ರ್ಯದ ವಿರುದ್ಧದ ಕುತಂತ್ರ. ಸೋನಿಯಾ ಗಾಂಧಿ ವಿರುದ್ಧ ಕೇಸ್ ಹಾಕುವ ಮೂಲಕ‌ ಪ್ರಜಾಪ್ರಭುತ್ವ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ' ಎಂದು ದೂರಿದರು.

ಶಾಸಕ ಕೃಷ್ಣ ಭೈರೇಗೌಡ ಮಾತನಾಡಿ, 'ನಮ್ಮ ನಾಯಕಿಗೆ ಕಿರುಕುಳ ಕೊಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಲು ಹೊರಟಿದ್ದಾರೆ. ಇಡಿ, ಸಿಬಿಐ, ಐಟಿಯನ್ನು ಚೂ ಬಿಟ್ಟಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿಲ್ಲ. ಆದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ' ಎಂದು ಆರೋಪಿಸಿದರು.

'ರಾಜಕೀಯ ವಿರೋಧಿಗಳು ಇರಬಾರದೆಂಬ ಕಾರಣಕ್ಕೆ ಈ ಷಡ್ಯಂತ್ರ. ಏಕಚಕ್ರಾಧಿಪತ್ಯ ಇರಬೇಕೆಂಬುದು ಬಿಜೆಪಿಯವರ ಉದ್ದೇಶ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಎಲ್ಲ ವಿರೋಧ ಪಕ್ಷಗಳ ಮೇಲೆ ಒಟ್ಟು 570 ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಲೆಯೇ 75ಕೇಸ್ ಹಾಕಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಕೆ.ಆರ್‌. ರಮೇಶ್ ಕುಮಾರ್ ಮಾತನಾಡಿ, 'ಸೋನಿಯಾ ಗಾಂಧಿ ಕಾನೂನಿಗಿಂತ ಮೇಲೆ ಇದ್ದಾರಾ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ 12 ವರ್ಷಕ್ಕೂ ಹೆಚ್ಚು ಕಾಲ ನೆಹರು ಜೈಲಿನಲ್ಲಿದ್ದರು. ಆರ್‌ಎಸ್‌ಎಸ್, ಜನಸಂಘದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೈಲಿಗೆ ಹೋಗಿದ್ದರಾ' ಎಂದು ಪ್ರಶ್ನಿಸಿದರು.

'ಇಡಿ ತನಿಖಾ ಸಂಸ್ಥೆ ವಿಚಾರಣೆಗೆ ನಮ್ಮ ಆಕ್ಷೇಪ ಇಲ್ಲ. ಪ್ರಧಾನಮಂತ್ರಿಯಾಗುವ ಅವಕಾಶವಿದ್ದರೂ ಸೋನಿಯಾ ಗಾಂಧಿ ನಿರಾಕರಿಸಿದರು. ಇಂಥವರು ನ್ಯಾಷನಲ್ ಹೆರಾಲ್ಡ್ ದುಡ್ಡು ಹೊಡೆಯುತ್ತಾರಾ? ರಾಜಕೀಯ ದುರುದ್ದೇಶದಿಂದ ಇಡಿ ಮೂಲಕ ಬಿಜೆಪಿಯವರು ವಿಚಾರಣೆ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯನ್ನು ಆತಂಕಕ್ಕೆ ಗುರಿಪಡಿಸಬೇಕು ಎಂಬ ಉದ್ದೇಶವಿದೆ' ಎಂದರು.

ಅದಕ್ಕೂ ಮೊದಲು ತಮ್ಮ ನಿವಾಸದ ಬಳಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 'ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ. ರಾಹುಲ್ ಗಾಂಧಿಯವರನ್ನು ಐವತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಏನಾಯ್ತು? ಅದರ ವಿಡಿಯೋ ಬಿಡಲಿ ನೋಡೋಣ. ಸುಳ್ಳು ಕೇಸ್ ದಾಖಲಿಸಿ ತನಿಖೆ ಮಾಡುತ್ತಿದಾರೆ' ಎಂದು ದೂರಿದರು.

ಉಮಾಶ್ರೀ ಮಾತನಾಡಿ, 'ಬಿಜೆಪಿಯವರು ಭ್ರಷ್ಟರು. ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸಲು ಹೊರಟಿದ್ದಾರೆ. ನಮ್ಮದು ಭಯಪಡುವ ವಂಶವಲ್ಲ. ನಮ್ಮದು ಭಾರತ ಕಟ್ಟಿರುವ ಪಕ್ಷ. ನಮ್ಮ ಪಕ್ಷವನ್ನು ನಾಶಪಡಿಸಬಹುದು ಎಂದು ಅಂದುಕೊಂಡಿದ್ದಾರೆ. ಇವರು ಹೇಡಿಗಳು ಎನ್ನುವುದು ಜಗಜ್ಜಾಹೀರಾಗಿದೆ. ಸೋನಿಯಾ ಗಾಂಧಿ ಭಾರತದ ನಾರಿಯಾಗಿರುವವರು. ನಮ್ಮ ನಾಯಕಿಗೆ ಆತ್ಮಸ್ಥೈರ್ಯ ಇದೆ. ದೇಶದ ನೂರಾರು ಕೋಟಿ ಜನರು ನಮ್ಮ ನಾಯಕಿ ಬೆನ್ನಿಗೆ ನಿಂತಿದ್ದಾರೆ' ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, 'ಪ್ರಧಾನಿ ನರೇಂದ್ರ ಮೋದಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ಪ್ರಧಾನಿಯಾಗುವ ಅವಕಾಶ ಇದ್ದರೂ ತಿರಸ್ಕಾರ ಮಾಡಿ ಆರ್ಥಿಕ ತಜ್ಞರಿಗೆ ಅವಕಾಶ ಮಾಡಿಕೊಟ್ಟಿದ್ದರು' ಎಂದರು.

'ಮೋದಿ ಅವರದ್ದು ಹಿಟ್ಲರ್ ವರ್ತನೆ. ಇವರಿಗೆ ಸಂವಿಧಾನ, ಪ್ರಜಾಪ್ರಭುತ್ವ ಇರಬಾರದು. ನಾವೆಲ್ಲರೂ ನಮ್ಮ ನಾಯಕರಿಗೆ ಧೈರ್ಯ ತುಂಬಬೇಕಿದೆ. ಅವರ ಜೊತೆ ನಾವೆಲ್ಲರೂ ಇದ್ದೇವೆ. ನಾಳೆ ಕೂಡ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ' ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಶಾಸಕರು, ಮಾಜಿ ಸಚಿವರು, ಮುಖಂಡರುಗಳು ಭಾಗವಹಿಸಿದರು.