ಬೆಚ್ಚಿಬೀಳಿಸುವ ಕೃತ್ಯ.. ದೀಪಾವಳಿ ಪಾರ್ಟಿ ವೇಳೆ ಬಾಲಕನಿಂದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ!


BHNಬೆಂಗಳೂರು: ಮನುಷ್ಯ ಪಶುಗಳಿಗಿಂತ ಕಡೆಯಾಗಿರುವ ಸಾಕಷ್ಟು ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ. ಸಣ್ಣ ಮಗುವಿನಿಂದ ಹಿಡಿದು ವೃದ್ಧೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮೃಗೀಯ ವರ್ತನೆಗೆ ಸಾಕ್ಷಿಯಾಗಿವೆ.
ಅತ್ಯಾಚಾರವೆಂಬುದು ಸಮಾಜಕ್ಕೆ ಎದುರಾಗಿರುವ ಪಿಡುಗಾಗಿದೆ. ಅಂತಹದೇ ಒಂದು ಬೆಚ್ಚಿ ಬೀಳಿಸುವ ಪ್ರಕರಣ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಯ ಮೇಲೆ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮೂರು ದಿನಗಳ ಹಿಂದೆ ಈ ಹೇಯಕೃತ್ಯ ನಡೆದಿದ್ದು, ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಅಪಾರ್ಟ್​ಮೆಂಟ್​ನಲ್ಲಿ ಯುವಕ-ಯುವತಿಯರು ದೀಪಾವಳಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕನಾಗಿರುವ ಬಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮೂರು ದಿನಗಳ ಹಿಂದೆ ಬಾಲಕನಿಂದ ಕೃತ್ಯ ನಡೆದಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರು ಪಡಿಸಿ ರಿಮ್ಯಾಂಡ್ ಹೋಮ್​ಗೆ ಕಳುಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದ್ದಾರೆ.