UPನವದೆಹಲಿ:
ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದೆಹಲಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರು ಇಂದು ಮುಂಜಾನೆ 2.30ರ ಸುಮಾರಿಗೆ ಬಲವಂತದಿಂದ ನೆರವೇರಿಸಿದರು ಮತ್ತು ಯುವತಿಯ ಪೋಷಕರು, ಸಂಬಂಧಿಕರನ್ನು ಮನೆಯಲ್ಲಿಯೇ ಕೂಡಿಹಾಕಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

ರಾತ್ರಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕುಟುಂಬವು ಪೊಲೀಸರೊಂದಿಗೆ ವಾದಿಸುತ್ತಿದ್ದು, ಯುವತಿಯ ಮೃತ ದೇಹವನ್ನು ಕೊಂಡೊಯ್ಯುವಾಗ ಮಹಿಳಾ ಸಂಬಂಧಿಕರನ್ನು ಪಕ್ಕಕ್ಕೆ ಸರಿಸಿದ ಪೊಲೀಸರು, ಅಂತಿಮ ದರ್ಶನಕ್ಕೂ ಅವಕಾಶ ನೀಡದೆ ನೇರವಾಗಿ ಶವಸಂಸ್ಕಾರಕ್ಕೆ ಕರೆದೊಯ್ಯುತ್ತಾರೆ. ಇದನ್ನು ಕಂಡ ಅಸಹಾಯಕ ತಾಯಿ ಕಣ್ಣೀರಾಕುವ ದೃಶ್ಯಾವಳಿ ವಿಡಿಯೊದಲ್ಲಿದೆ.
 ಅತ್ಯಾಚಾರ ಮತ್ತು ಹಲ್ಲೆಗೊಳಗಾಗಿದ್ದ ಯುವತಿಯನ್ನು ದೆಹಲಿಯ ಸಫ್ದಾರ್‌ಗುಂಜ್ ಆಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಚಿಕಿತ್ಸೆ ಫಲಿಸದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದಳು. ಘಟನೆ ಸಂಬಂಧ ಮೇಲ್ಜಾತಿಯವರು ಎನ್ನಲಾದ ನಾಲ್ವರು ಅತ್ಯಾಚಾರ ಆರೋಪಿಗಳು ಇದೀಗ ಜೈಲಿನಲ್ಲಿದ್ದಾರೆ. ಯುವತಿಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದರು ಎನ್ನಲಾಗಿದೆ.

ದೆಹಲಿ ಆಸ್ಪತ್ರೆಯ ಹೊರಗಿನ ಪ್ರತಿಭಟನಾಕಾರರು 'ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ' ಎಂದು ಘೋಷಣೆ ಕೂಗುತ್ತಿದ್ದಂತೆ, ಯುವತಿಯ ಪೋಷಕರಿಗೂ ತಿಳಿಯದಂತೆ ಯುಪಿ ಪೊಲೀಸರು ಮೃತದೇಹವನ್ನು ಅಲ್ಲಿಂದ ಸಾಗಿಸಿದರು ಎಂದು ಯುವತಿಯ ಸೋದರ ಆರೋಪಿಸಿದ್ದಾರೆ. ಆಕೆಯ ತಂದೆ ಮತ್ತು ಸಹೋದರರು ಪ್ರತಿಭಟನೆಯಲ್ಲಿ ಕುಳಿತುಕೊಂಡ ಬಳಿಕ ಉತ್ತರ ಪ್ರದೇಶದ ಸಂಖ್ಯಾ ಫಲಕ ಹೊಂದಿದ್ದ ಕಪ್ಪು ಸ್ಕಾರ್ಪಿಯೋದಲ್ಲಿ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ.

ಯುವತಿಯ ತಂದೆ ಎನ್‌ಡಿಟಿವಿಯೊಂದಿಗೆ ಮಾತನಾಡಿ, ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಯಬೇಕೆಂದು ನಾವು ಬಯಸಿದ್ದೆವು. ಆದರೆ ನಮ್ಮ ಪ್ರತಿಭಟನೆಯ ಹೊರತಾಗಿಯೂ, ಅಂತ್ಯಕ್ರಿಯೆ ನಡೆಸಲಾಯಿತು. ಅವರು ಮೃತದೇಹವನ್ನು ಬಲವಂತವಾಗಿ ತೆಗೆದುಕೊಂಡು ಹೋದರು. ನಮ್ಮ ಮಗಳ ಮುಖವನ್ನು ಕೂಡ ಕೊನೆಯ ಬಾರಿಗೆ ನೋಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯುವತಿಯ ಶವವನ್ನು ಮಧ್ಯರಾತ್ರಿಯ ನಂತರ ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹಾಥರಸದಲ್ಲಿರುವ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಪೊಲೀಸರೇ ಅಂತ್ಯ ಸಂಸ್ಕಾರ ನಡೆಸಲು ಮುಂದಾಗಿದ್ದಾರೆ ಎಂದು ಶಂಕಿಸಿದ ಆಕೆಯ ಕುಟುಂಬ ಮತ್ತು ಗ್ರಾಮಸ್ಥರು, ಇದು 'ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿದೆ' ಎಂದು ಪೊಲೀಸರೊಂದಿಗೆ ವಾಗ್ದಾಳಿ ನಡೆಸಿದ್ದಾರೆ. ಯುವತಿಯ ತಂದೆಯು ಸದ್ಯಕ್ಕೆ ತನ್ನ ಮನೆಗೆ ತೆಗೆದುಕೊಂಡು ಹೋಗಿ ಬೆಳಗ್ಗೆ ದಹನ ಮಾಡಲು ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರ ಈ ಕ್ರಮವನ್ನು ಖಂಡಿಸಿ ವಾಹನವನ್ನು ತಡೆಯಲು ಯತ್ನಿಸಿ ಪ್ರತಿಭಟನೆಗೆ ಮುಂದಾದ ಯುವತಿಯ ಸಂಬಂಧಿಕರನ್ನು ದೂರಕ್ಕೆ ತಳ್ಳಿ ಅಂತ್ಯಕ್ರಿಯೆ ನಡೆಸುವ ಸ್ಥಳದತ್ತ ತೆರಳಿದ್ದಾರೆ. ಬೆಳಗ್ಗೆ ಅಂತ್ಯಕ್ರಿಯೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಷ್ಕರ್ ಅವರಿಗೂ ಮನವಿ ಸಲ್ಲಿಸಲಾಯಿತು. ಆದರೆ, ಕುಟುಂಬದ ಹೆಚ್ಚಿನವರು ಮನೆಯಲ್ಲಿರುವಾಗ ಪೊಲೀಸರು ಬೆಳಿಗ್ಗೆ 2.30ಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ವರದಿಗಾರರನ್ನು, ಕುಟುಂಬ ಮತ್ತು ಗ್ರಾಮಸ್ಥರನ್ನು ದೂರವಿರಿಸಲು ಹಾಥರಸದ ಪೊಲೀಸರು ಮಾನವ ಸರಪಳಿಯನ್ನು ರಚಿಸಿದರು. ಅಂತ್ಯ ಸಂಸ್ಕಾರದ ಸ್ಥಳದಲ್ಲಿ ಪೊಲೀಸರು ಮಾತ್ರ ಹಾಜರಿದ್ದರು. ಆಕೆಯ ಕುಟುಂಬವು ಅಂತಿಮ ದರ್ಶನವನ್ನು ಕೂಡ ಪಡೆಯಲಾಗಲಿಲ್ಲ. ಅವರನ್ನೆಲ್ಲ ಮನೆಯ್ಲಿ ಬಂಧಿಸಲಾಗಿತ್ತು ಎಂದು ಎಂದು ಆರೋಪಿಸಲಾಗಿದೆ.

Bangalore Hot News