BHN

ವಿಜಯಪುರ: ತಾಳಿಕೋಟಿ ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣವು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದೆ.

ಗ್ರಾಮಸ್ಥರು, ಪೊಲೀಸರು‌ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ಶಾಂತಿ ಸಂಧಾನ ಸಭೆ ನಡೆಸಿ, ಪರಸ್ಪರ ಸೌಹಾರ್ದದಿಂದ ಇರುವಂತೆ ಸೂಚಿಸಲಾಯಿತು.

ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಸರ್ಕಾರದ ನಿಯಮಾವಳಿಯಂತೆ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದೌರ್ಜನ್ಯಕ್ಕೊಳಗಾದ ಸಂತ್ರಸ್ತನಿಗೆ ಈಗಾಗಲೇ ₹ 2 ಲಕ್ಷ ಮಂಜೂರು ಮಾಡಲಾಗಿದೆ. ಈ ಸಂಬಂಧ ₹ 50 ಸಾವಿರ ಮೊತ್ತದ ಚೆಕ್ ನೀಡಲಾಗಿದೆ. ಮಿಣಜಗಿ ಪರಿಶಿಷ್ಟ ಕಾಲೊನಿಯ ಪ್ರತಿಯೊಬ್ಬರಿಗೂ 2 ಕೆ.ಜಿ.ಯಂತೆ ಅಕ್ಕಿ, ಬೇಳೆ, ಬೆಲ್ಲ, ಅವಲಕ್ಕಿ, ರವಾ ಇನ್ನಿತರ ಆಹಾರ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.

ಶಾಸಕರ ಶಿಫಾರಸಿನ ಮೇರೆಗೆ ಮಿಣಜಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಾರಂಭಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.

ಗ್ರಾಮದ ಪರಿಶಿಷ್ಟ ಜಾತಿ ಜನರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಲು 4 ಎಕರೆ ಸರ್ಕಾರಿ ಜಮೀನು ನೀಡಲು ತಾಳಿಕೋಟಿ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರರು 2 ಎಕರೆ ಜಮೀನು ಮಂಜೂರು ಮಾಡುವುದಾಗಿ ತಿಳಿಸಿದರು
ಪರಿಶಿಷ್ಟ ಕಾಲೊನಿಯ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸಲು ಪಿಡಿಒ ಹಾಗೂ ತಾಳಿಕೋಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಾಬ್ ಕಾರ್ಡ್ ಒದಗಿಸಲು ಸಹ ಸೂಚಿಸಲಾಯಿತು.

ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರು ಒದಗಿಸಲು ಮುದ್ದೇಬಿಹಾಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಮಿಣಜಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಸೂಚಿಸಿದರು.

ಪ್ರಕರಣ ಸಂಬಂಧ ಈಗಾಗಲೇ 5 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕಾಗಿ ತನಿಖೆ ಜಾರಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದರು.
Bangalore Hot News