siddaramaiah

ಬೆಂಗಳೂರು, ಆ.19: ಇಡೀ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿಹೋಗಿದೆ. ರಾಜ್ಯ ಬಿಜೆಪಿ ಸರಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯದ ರೊಟ್ಟಿ ಬಡಿಯುತ್ತಾ ಕೂತಿದೆ. ನೊಂದ ಜನರ ಗೋಳು ಅರಣ್ಯರೋದನ. ಅತಿವೃಷ್ಟಿಯ ಪರಿಹಾರದಲ್ಲಿ ಕಳೆದ ವರ್ಷದ ವೈಫಲ್ಯ ಈ ಬಾರಿ ಜನರ ಕಷ್ಟ-ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವರು ಅತಿವೃಷ್ಟಿ ಸಮೀಕ್ಷೆಗೆ ಪ್ರವಾಸ ಮಾಡುತ್ತಿದ್ದಾರೆ, ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಕಾವಲ್‍ಭೈರಸಂದ್ರ ಗಲಭೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಂದಾಯ ಸಚಿವರಿಗೆ ಬೆಂಗಳೂರಿನಲ್ಲೇನು ಕೆಲಸ? ಮುಖ್ಯಮಂತ್ರಿ ಅವರೇ, ಮೊದಲು ಇವರನ್ನು ಪ್ರವಾಹಪೀಡಿತ ಪ್ರದೇಶಕ್ಕೆ ಕಳಿಸಿಕೊಡಿ ಎಂದು ಅವರು ಆಗ್ರಹಿಸಿದ್ದಾರೆ.

ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ.
ಕೊರೋನ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ ಪಕ್ಷದ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Bangalore Hot News