Siddaramaiah

ಬೆಂಗಳೂರು: ಕೆಜೆಹಳ್ಳಿ, ಡಿಜೆಹಳ್ಳಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವ ಗಲಭೆ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ .

ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ ಗುಪ್ತಚರ ಇಲಾಖೆಯ ವೈಫಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ . ಸರ್ಕಾರ ಅನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ .

ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು . ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು . ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಅನಾಹುತಕ್ಕೆ ಅವಕಾಶ ಇರುತ್ತಿರಲಿಲ್ಲ .

ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು ? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರಾರು ? ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ . ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು .ಪ್ರಾಮಾಣಿಕರು , ದಕ್ಷರು ಅನ್ನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳನ್ನು ' ನಾನ್ ಎಕ್ಸಿಕ್ಯೂಟಿವ್ ' ಹುದ್ದೆಗಳಲ್ಲಿ ಕೂರಿಸಿದ್ದೀರಿ , ಭ್ರಷ್ಟರು , ಆಸೂಕ್ಷ್ಮರು ಆದ ಹಲವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ . ಹೀಗಾಗಿ ಸೂಕ್ತವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ . 

ಘಟನೆ ನಡೆದಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ( ಈ ಹಿಂದೆಯೂ ಈ ಪ್ರದೇಶಗಳಲ್ಲಿ ಸಮಸ್ಯೆಗಳಾಗಿದ್ದವು ) ಮತ್ತು ಘಟನೆಗೆ ಕಾರಣವಾದ ವಿಷಯವೂ ಅತ್ಯಂತ ಸೂಕ್ಷ್ಮವಾಗಿತ್ತು . ಇದನ್ನು ನಿರ್ಲಕ್ಷಿಸಲು ಕಾರಣವೇನು ? 

ಶಾಸಕರ ಮನೆಯನ್ನು , ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ ? ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು ಬಿಟ್ಟು ತಲೆಕೆಟ್ಟ , ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು . 

ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೋಮುವಾದಿಯೊಬ್ಬನಿಗೆ , ಸಚಿವರು ನಿಮ್ಮ ಮೇಲಿನ ಎಲ್ಲಾ ಪ್ರಕರಣ ವಾಪಸ್ಸು ತೆಗೆದುಕೊಳ್ಳುತ್ತೇವೆಂದು ಹೇಳುವ ಮಾತುಕತೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು . ಅದು ನಿಜವೇ ಆಗಿದ್ದರೆ ಸಮಾಜದ ಸ್ವಾಸ್ಥ್ಯವನ್ನು ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೆ ?

ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನರನ್ನು ಕಮ್ಯುನಲ್ ಗೂಂಡಾಗಳೆಂದು ಗುರುತಿಸಿದ್ದೀರಿ ? ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಿದ್ದೀರಿ ? ಈ ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವ ತಾಕತ್ತನ್ನು ನೀವು ಪ್ರದರ್ಶಿಸಲು ಸಾಧ್ಯವೆ ? ನಿಮ್ಮ ಕಡತದಲ್ಲಿನ ದಾಖಲೆಗಳ ಪ್ರಕಾರ ನಿಮ್ಮದೇ ಪಕ್ಷದ ಅಂಗ ಸಂಘಟನೆಗಳು ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿ ಅಸಂಖ್ಯಾತ ಪ್ರಕರಣಗಳಿವೆ . ಈ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ನಾವು ಈ ವಿಷಯದಲ್ಲಿ ನಿಮ್ಮ ಜೊತೆ ಇರುತ್ತೇವೆ . 

ಹಿಂದೆ ಮುಂದೆ ನೋಡದೆ ಜನರನ್ನು ಧರ್ಮದ ಆಧಾರದ ಮೇಲೆ ದೊಂಬಿಯೆಬ್ಬಿಸಲು ಪ್ರಯತ್ನಿಸಿದ ಶೃಂಗೇರಿಯ ಜೀವರಾಜ್ ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ , ಶೃಂಗೇರಿಯಲ್ಲಿ ಆರೋಪಿ
ಪತ್ತೆಯಾಗುವ ಮೊದಲೇ ಅಪರಾಧಿಗಳು ಯಾರು ಎಂದು ಬಿ.ಜೆ.ಪಿ. ತೀರ್ಮಾನಿಸಿತ್ತು . ಬಡ ತರಕಾರಿ ವ್ಯಾಪಾರಿಗಳು / ಬೀದಿ ಬದಿಯ ವ್ಯಾಪಾರಿಗಳೇ ಈ ಕೃತ್ಯ ಮಾಡಿರುವುದೆಂದು ಅವರ ತಲೆಗೆ ಅಪರಾಧವನ್ನು ಕಟ್ಟಲಾಗಿತ್ತು . ಮಸೀದಿಯಲ್ಲಿ ಸಿ.ಸಿ.ಟಿವಿಗಳು ಇರದಿದ್ದರೆ ಬಜರಂಗದಳದ ಮಾಜಿ ಕಾರ್ಯಕರ್ತನ ಬದಲಿಗೆ ಇನ್ಯಾರೋ ಇರುತ್ತಿದ್ದರು .

ಸಾರ್ವಜನಿಕ ಆಸ್ತಿ - ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡುವುದು ಒಳ್ಳೆಯ ವಿಚಾರವೇ . ಆದರೆ ಇದು ಒಂದು ಗುಂಪಿಗೆ , ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು . ಹಾಗೆ ಮಾಡುವುದಾದರೆ ಪೂರ್ವಾನ್ವಯಗೊಳಿಸಬೇಕು . ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕಮ್ಯುನಲ್ ಮತ್ತಿತರ ಗಲಭೆಗಳಲ್ಲಿ ಮಾಡಿರುವ ಹಾನಿಯ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸುತ್ತೇನೆ . 

ಆಡಳಿತ ಪಕ್ಷವೊಂದು ಸತ್ಯ ಶೋಧನಾ ತಂಡ ರಚಿಸುವುದು ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ ಕಾಣುತ್ತಿದೆ . ಆಡಳಿತ ಪಕ್ಷವೊಂದು ಸತ್ಯ ಶೋಧನೆ ಮಾಡುತ್ತೇನೆಂದು ಹೊರಟರೆ ಅದು ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . 

ನಿಮ್ಮ ಸರ್ಕಾರಕ್ಕೆ ಪೊಲೀಸರ ಮೇಲೆ ನಂಬಿಕೆ ಇಲ್ಲವೆ ? ನಿಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಿಗೆ ಜನರ ತೆರಿಗೆಯ ಹಣದಲ್ಲಿ ಸಂಬಳ , ಸಾರಿಗೆ ಮುಂತಾದ ಸವಲತ್ತುಗಳನ್ನು ಯಾಕೆ ಕೊಡತ್ತಿದ್ದೀರಿ ? ಮುಲಾಜಿಲ್ಲದೆ ಅವರನ್ನು ಮನೆಗೆ ಕಳಿಸಿ .

ಘಟನೆಯಲ್ಲಿ ಎಸ್‌ಡಿಪಿಐ ಪಾತ್ರ ಇದೆ ಎಂದು ಹೇಳಲಾಗುತ್ತಿದೆ . ಯಾರೇ ತಪ್ಪು ಮಾಡಿದ್ದರೂ ಯಾವ ಸಂಘಟನೆಯೇ ತಪ್ಪು ಮಾಡಿದ್ದರೂ ಸಮರ್ಪಕವಾದ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ .

ಈ ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ .

Bangalore Hot News