RBI

ಹೊಸದಿಲ್ಲಿ :  ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ 200 ರೂ. ಮತ್ತು 500 ರೂ. ಮುಖಬೆಲೆಯ ಖೋಟಾ ನೋಟು ಪತ್ತೆ ಪ್ರಕರಣದಲ್ಲಿ 2019-20ರಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ತಿಳಿಸಿದೆ.

2019-20ರಲ್ಲಿ 500 ರೂ. ಸರಣಿಯ 30,054 ಖೋಟಾ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾಗಿದ್ದರೆ, 2018-19ರಲ್ಲಿ 21,865 ಖೋಟಾ ನೋಟು ಪತ್ತೆಯಾಗಿತ್ತು (37% ಹೆಚ್ಚಳ). ಇದೇ ರೀತಿ, 2018-19ರಲ್ಲಿ 200 ರೂ. ಮುಖಬೆಲೆಯ 12,728 ಖೋಟಾ ನೋಟುಗಳು ಪತ್ತೆಯಾಗಿದ್ದರೆ, 2019-20ರಲ್ಲಿ 31,969 ನಕಲಿ ನೋಟುಗಳು ಪತ್ತೆಯಾಗಿವೆ(151% ಹೆಚ್ಚಳ).

ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆ ಮಾಡಿದ ಖೋಟಾ ನೋಟಿನ ಪ್ರಮಾಣ ಇದಾಗಿದೆ. ಪೊಲೀಸ್ ಹಾಗೂ ಇತರ ಜಾರಿ ಇಲಾಖೆಗಳು ವಶಕ್ಕೆ ಪಡೆದಿರುವ ಖೋಟಾ ನೋಟುಗಳು ಇದರಲ್ಲಿ ಸೇರಿಲ್ಲ ಎಂದು ವರದಿ ತಿಳಿಸಿದೆ. 2018-19ರಲ್ಲಿ 2000 ರೂ. ಮುಖಬೆಲೆಯ 21,847 ಖೋಟಾನೋಟುಗಳನ್ನು ವಶಕ್ಕೆ ಪಡೆದಿದ್ದರೆ, 2019-20ರಲ್ಲಿ ಈ ಸಂಖ್ಯೆ 17,020ಕ್ಕೆ ಇಳಿದಿದೆ. 2016ರಲ್ಲಿ ನರೇಂದ್ರ ಮೋದಿ ಸರಕಾರ 500 ರೂ. ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿತ್ತು. ಖೋಟಾ ನೋಟುಗಳ ಚಲಾವಣೆ ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದ ಕೇಂದ್ರ ಸರಕಾರ, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ 500 ರೂ. ಮತ್ತು 200 ರೂ. ಮುಖಬೆಲೆಯ ಹೊಸ ಸರಣಿಯ ನೋಟುಗಳನ್ನು ಬಿಡುಗೆಗೊಳಿಸಿತ್ತು ಮತ್ತು 1000 ರೂ. ಕರೆನ್ಸಿ ನೋಟಿನ ಬದಲು 2000 ರೂ. ಕರೆನ್ಸಿ ನೋಟು ಬಿಡುಗಡೆಗೊಳಿಸಿತ್ತು. ಆದರೆ, ನೋಟು ರದ್ದತಿಯ ಪ್ರಧಾನ ಉದ್ದೇಶವೇ ವಿಫಲವಾಗಿರುವುದು ಇದೀಗ ಆರ್‌ಬಿಐ ವರದಿಯಿಂದ ಸ್ಪಷ್ಟವಾಗಿದೆ.

2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳು 2019-20ರಲ್ಲಿ ಮುದ್ರಿತವಾಗಿಲ್ಲ ಮತ್ತು ಈ ನೋಟುಗಳ ಚಲಾವಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2018ರ ಮಾರ್ಚ್ ಅಂತ್ಯದ ವೇಳೆ ಚಲಾವಣೆಯಲ್ಲಿದ್ದ 2000 ರೂ . ಮುಖಬೆಲೆಯ ಕರೆನ್ಸಿ ನೋಟುಗಳ ಒಟ್ಟು ಸಂಖ್ಯೆ 33,632 ಲಕ್ಷವಾಗಿತ್ತು. 2019ರ ಮಾರ್ಚ್ ಅಂತ್ಯದಲ್ಲಿ ಈ ಸಂಖ್ಯೆ 32,910 ಲಕ್ಷಕ್ಕೆ ಮತ್ತು 2020ರ ಮಾರ್ಚ್ ಅಂತ್ಯದಲ್ಲಿ 27,398 ಲಕ್ಷಕ್ಕೆ ಇಳಿದಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಒಟ್ಟು ಮೌಲ್ಯವನ್ನು ಗಮನಿಸಿದರೆ, 2017-18ರಲ್ಲಿ ಒಟ್ಟು ಮೌಲ್ಯದ 37%ದಷ್ಟು 2000 ರೂ. ಮುಖಬೆಲೆಯ ಕರೆನ್ಸಿ ನೋಟುಗಳಿದ್ದರೆ, 2018-19ರಲ್ಲಿ ಇದು 31%ಕ್ಕೆ ಮತ್ತು 2019-20ರಲ್ಲಿ 23%ಕ್ಕೆ ಇಳಿದಿದೆ. ಕೇಂದ್ರ ಸರಕಾರ ಕ್ರಮೇಣ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಕಡಿಮೆಗೊಳಿಸಿ ಕಡಿಮೆ ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆಗೆ ಒತ್ತು ನೀಡುವ ಉದ್ದೇಶ ಹೊಂದಿರುವುದು ಇದರಿಂದ ಸ್ಪಷ್ಟವಾಗಿದೆ.

ಹಣ ಅಕ್ರಮ ದಾಸ್ತಾನು ಇರಿಸುವವರು, ಹಣದ ಅಕ್ರಮ ಸಾಗಣೆದಾರರು ಅಧಿಕ ಮೌಲ್ಯದ ನೋಟುಗಳನ್ನೇ ಹೆಚ್ಚಾಗಿ ಬಳಸುವುದರಿಂದ ಅಧಿಕ ಮುಖಬೆಲೆಯ ನೋಟುಗಳ ಮುದ್ರಣ ಕಡಿಮೆಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಕ್ಸ್: 20, 2000 ರೂ. ಮುಖಬೆಲೆಯ

2019-20ರಲ್ಲಿ ಒಟ್ಟು 2,96,695 ಖೋಟಾ ನೋಟು ಪತ್ತೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 144.6% ಹೆಚ್ಚಳವಾಗಿದೆ. ಮಹಾತ್ಮಾ ಗಾಂಧಿ (ಹೊಸ) ಸರಣಿ ನೋಟುಗಳಲ್ಲಿ 10 ರೂ. ಮುಖಬೆಲೆಯ ಖೋಟಾ ನೋಟುಗಳ ಪ್ರಮಾಣದಲ್ಲಿ 144.6%, 50 ರೂ. ಮುಖಬೆಲೆಯ ಖೋಟಾ ನೋಟುಗಳ ಪ್ರಮಾಣದಲ್ಲಿ 28.7% ಹೆಚ್ಚಳ, 200 ರೂ. ಮುಖಬೆಲೆಯ ಖೋಟಾ ನೋಟುಗಳ ಪ್ರಮಾಣಣದಲ್ಲಿ 151.2% ಹಾಗೂ 500 ರೂ. ಮುಖಬೆಲೆಯ ಖೋಟಾ ನೋಟುಗಳ ಪ್ರಮಾಣದಲ್ಲಿ 37.5% ಹೆಚ್ಚಳವಾಗಿದೆ. ಆದರೆ 2000 ರೂ. ಮತ್ತು 20 ರೂ. ಮುಖಬೆಲೆಯ ಖೋಟಾ ನೋಟುಗಳ ಪ್ರಮಾಣ ಕಡಿಮೆಯಾಗಿದೆ.

Bangalore Hot News