MP Modi

 ಹೊಸದಿಲ್ಲಿ,ಆ.19: ಕೋವಿಡ್-19 ಸಂತ್ರಸ್ತರ ನೆರವಾಗಿ ರೂಪಿಸಲಾಗಿರುವ ಪಿಎಂ-ಕೇರ್ಸ್‌ ನಿಧಿಗೆ ಈವರೆಗೆ ಸಾರ್ವಜನಿಕ ರಂಗದ ಸುಮಾರು 38 ಸಂಸ್ಥೆಗಳು ಒಟ್ಟು 2,105 ಕೋಟಿ ಹಣವನ್ನು ದೇಣಿಗೆಯಾಗಿ ನೀಡಿವೆಯೆಂದು ಆಂಗ್ಲದಿನಪತ್ರಿಕೆಯೊಂದು ತಿಳಿಸಿದೆ.

ಮಾಹಿತಿಹಕ್ಕು ಕಾಯ್ದೆಯಡಿ ಪಡೆಯಲಾದ ಪತ್ರಿಕೆಗೆ ಈ ವಿಷಯ ಲಭ್ಯವಾಗಿದ್ದು ಅದು ತೈಲ ಹಾಗೂ ನೈಸರ್ಗಿಕ ಅನಿಲ ನಿಗಮ (ಓಎನ್‌ಜಿಸಿ), ಭಾರತೀಯ ರೈಲ್ವೆಯ ಆಹಾರ ಪೂರೈಕೆ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ), ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಆಯಿಲ್ ಇಂಡಿಯಾ ಹಾಗೂ ಕೋಲ್ ಇಂಡಿಯಾ ಪಿಎಂ-ಕೇರ್ಸ್‌ ನಿಧಿಗೆ ಗಣನೀಯ ಮೊತ್ತದ ಕೊಡುಗೆ ನೀಡಿರುವ ಸಾರ್ವಜನಿಕ ರಂಗದ ಕಂಪೆನಿಗಳಾಗಿವೆ.

ಆದಾಗ್ಯೂ ಕೇಂದ್ರ ಸರಕಾರವು ಪಿಎಂ ಕೇರ್ಸ್‌ ನಿಧಿ ಕುರಿತ ಯಾವುದೇ ಮಾಹಿತಿಯನ್ನು ನೀಡಲು ಪ್ರಧಾನಿ ಕಾರ್ಯಾಲಯವು ನಿರಾಕರಿಸುತ್ತಲೇ ಬಂದಿದೆ.


ಪಿಎಂ ಕೇರ್ಸ್‌ ನಿಧಿಯು ' ಸಾರ್ವಜನಿಕ ಪ್ರಾಧಿಕಾರ' ಅಲ್ಲವಾದ್ದರಿಂದ, ಅದು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲವೆಂದು ಪ್ರಧಾನಿ ಕಾರ್ಯಾಲಯ ಪ್ರತಿಪಾದಿಸುತ್ತಾ ಬಂದಿದೆ.ಆಗಸ್ಟ್ 13ರವರೆಗೆ ಪಿಎಂ-ಕೇರ್ಸ್‌ ನಿಧಿಗೆ ಸುಮಾರು 55 ಸಾರ್ವಜನಿಕರಂಗದ ಸಂಸ್ಥೆಗಳು ನೀಡಿದ ದೇಣಿಗೆಯ ಬಗ್ಗ ಮಾಹಿತಿ ಕೋರಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಅರ್ಜಿ ಸಲ್ಲಿಸಿತ್ತಾದರೂ ಅದಕ್ಕೆ 38 ಕಂಪೆನಿಗಳಿಂದ ಮಾಹಿತಿ ಲಭ್ಯವಾಗಿದೆ.

ಸಾರ್ವಜನಿಕ ರಂಗದ ಸಂಸ್ಥೆಗಳ ಪೈಕಿ ಓಎನ್‌ಜಿಸಿಯು ಗರಿಷ್ಠ 300 ಕೋಟಿ ರೂ.ಗಳ ದೇಣಿಗೆ ನೀಡಿದೆ. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಯಮಿತ (ಎನ್‌ಟಿಪಿಸಿ) 250 ಕೋಟಿ ರೂ.ಗಳ ದೇಣಿಗೆ ನೀಡಿದೆ. ಭಾರತೀಯ ತೈಲ ನಿಯಮಿತ (ಐಓಎಲ್) 225 ಕೋಟಿ ರೂ. ನೀಡಿದೆ. ಪವರ್ ಫೈನಾನ್ಸ್ ಕಾರ್ಪೋರೇಶನ್ ಹಾಗೂ ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ತಲಾ 200 ಕೋಟಿ ರೂ. ನೀಡಿವೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್), ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ), ಗ್ರಾಮೀಣ ವಿದ್ಯುದೀಕರಣ ನಿಗಮ(ಆರ್‌ಇಸಿ), ಭಾರತೀಯ ಪೆಟ್ರೋಲಿಯಂ ಕಾರ್ಪೊರೇಶನ್ ನಿಗಮ (ಬಿಪಿಸಿಎಲ್) ಹಾಗೂ ಕೋಲ್ ಇಂಡಿಯಾ, 100 ಕೋಟಿ ರೂ.ಗೂ ಅಧಿಕ ದೇಣಿಗೆ ನೀಡಿದ ಸಾರ್ವಜನಿಕರಂಗದ ಇತರ ಸಂಸ್ಥೆಗಳಾಗಿವೆ.

ಬಹುತೇಕ ಸಾರ್ವಜನಿಕರಂಗದ ಸಂಸ್ಥೆಗಳು 2019ರ-20ರ ಸಾಲಿನಲ್ಲಿ ಬಳಕೆಯಾಗದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಪಿಎಂ ಕೇರ್ಸ್‌ನಿಧಿಗೆ ದೇಣಿಗೆಯಾಗಿ ನೀಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.

ಇನ್ನು ಕೆಲವು ಸಂಸ್ಥೆಗಳು ಸಿಎಸ್‌ಆರ್ ನಿಧಿಗೆ 2020-21ರ ಸಾಲಿನ ಸಿಎಸ್‌ಆರ್ ನಿಧಿಯನ್ನು ಪಿಎಂಕೇರ್ಸ್‌ಗೆ ವರ್ಗಾಯಿಸಿವೆ.

ಓಎನ್‌ಜಿಸಿ ಹಾಗೂ ಎಚ್‌ಪಿಸಿಎಲ್ ಕಂಪೆನಿಗಳು 2020-21ರ ಸಾಲಿನ ಸಿಎಸ್‌ಆರ್ ಬಜೆಟ್‌ನಿಂದ, ಪಿಎಂ ಕೇರ್ಸ್‌ ನಿಧಿಗೆ ಹಣವನ್ನು ವರ್ಗಾಯಿಸಿರುವುದನ್ನು ಓಎನ್‌ಜಿಸಿ ಹಾಗೂ ಎಚ್‌ಪಿಸಿಎಲ್ ಒಪ್ಪಿಕೊಂಡಿರುವುದಾಗಿ ಆರ್‌ಟಿಐ ಅರ್ಜಿ ತಿಳಿಸಿದೆ. ಆದಾಗ್ಯೂ ಪಿಎಂ ಕೇರ್ಸ್‌ಗೆ ತಾವು ನೀಡಲಿರುವ ಒಟ್ಟಾರೆ ಅನುದಾನದ ಮೊತ್ತವನ್ನು ಇನ್ನೂ ಕೂಡ ನಿರ್ಧರಿಸಬೇಕಾಗಿದೆ

Bangalore Hot News