H. Vishwanath

ಬೆಂಗಳೂರು: ಬಿಜೆಪಿ ನಾಯಕರು ಟಿಪ್ಪು ವಿರುದ್ಧ ಹೇಳಿಕೆ ನೀಡುತ್ತಿದ್ದರೆ ಈಗ ಅವರದ್ದೇ ಪಕ್ಷದ ಮುಖಂಡ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೊಗಳಿದ್ದಾರೆ. ಟಿಪ್ಪು ಈ ನೆಲದ ಮಗ ವೀರ ಹೋರಾಟಗಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಪ್ರಶಂಸಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಹೋರಾಟದ ಬಗ್ಗೆ ಮಾತನಾಡುವಾಗ ಟಿಪ್ಪುವನ್ನು ಹೊಗಳಿದ್ದಾರೆ. ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾಧ್ಯಮದವರು ಟಿಪ್ಪು ಸುಲ್ತಾನ್ ಅವರನ್ನು ನಿಮ್ಮ ಪಕ್ಷ ಒಪ್ಪಿಕೊಳ್ಳಲ್ಲ ಅಲ್ವ ಅಂದಾಗ ವಿಶ್ವನಾಥ್ ಅವರು, ಅದು ಬೇರೆ ವಿಚಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ. ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಹೀಗಾಗಿ ಟಿಪ್ಪು ಸುಲ್ತಾನ್ ನನ್ನು ಸಣ್ಣವನಾಗಿ ಮಾಡಬಾರದು ಎಂದು ಹೇಳಿದರು.

ಪಠ್ಯದಲ್ಲಿ ಟಿಪ್ಪು ಪಾಠ ಕೈ ಬಿಟ್ಟಿಲ್ಲ. ಐದನೇ ತರಗತಿಯಿಂದ ಏಳನೇ ತರಗತಿಗೆ ಹಾಕಿದ್ದಾರೆ. ಗಾಂಧೀಜಿ ಇಂದ ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು. ಆಗಲೇ ರಕ್ತ ಒಂಥರಾ ಆಗೋದು ಎಂದರು.

ಇದೇ ವೇಳೆ ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳೋದಿಲ್ಲ. ಅವರು ತಿಳಿದು ಮಾಡಬೇಕು. ಈ ಸರ್ಕಾರ ಬರೋದಕ್ಕೆ ನಾನೂ ಒಬ್ಬ ಕಾರಣ. ನಾನು ಮಂತ್ರಿ ಆಗಿ ಏನೋ ಮಾಡಿ ಬಿಡ್ತೇನೆ ಎಂದಲ್ಲ. ನಾನು ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದೇನೆ ಎಂದು ನುಡಿದರು.
1978 ರಲ್ಲಿ ರಾಜಕೀಯಕ್ಕೆ ಬಂದೆ. ಖರ್ಗೆಯವರು 72 ರಲ್ಲಿ ಬಂದವರು. ನಮ್ಮಂತವರ ಅನುಭವ ಪಡೆಯಿರಿ ಎಂದು ಹೇಳ್ತಾ ಇದ್ದೇನೆ. ನಾನು ಯಡಿಯೂರಪ್ಪರ ಮನೆಗೆ ಹೋಗಿ ಮಂತ್ರಿ ಮಾಡಿ ಅನ್ನಲ್ಲ. ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಂತ್ರಿ ಸ್ಥಾನದ ಬಗ್ಗೆ ಪ್ರಸ್ತಾಪಿಸಿದರು.

ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಯಡಿಯೂರಪ್ಪನವರು ಕಾಂಗ್ರೆಸ್, ಜೆಡಿಎಸ್‍ನಿಂದ ಬಂದ ಎಲ್ಲ ನಾಯಕರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಉಪಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧಿಸಿದ್ದ ಎಚ್ ವಿಶ್ವನಾಥ್ ಮತ್ತು ಹೊಸಕೋಟೆಯಿಂದ ನಿಂತಿದ್ದ ಎಂಟಿಬಿ ನಾಗರಾಜ್ ಸೋತಿದ್ದರು.

Bangalore Hot News