ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆಕೋರರ ಪೋಷಕರು ಕಣ್ಣೀರು

BHN

ಬೆಂಗಳೂರು: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆಕೋರರ ಪೋಷಕರು ಜಮಾಯಿಸಿದ್ದಾರೆ.

ಗಲಭೆ ಪ್ರಕರಣ ನಡೆದ ದಿನದಿಂದ ಡಿಜೆ ಹಳ್ಳಿ ಪೊಲೀಸರು ಮಿಡ್‍ನೈಟ್ ಕಾರ್ಯಾಚರಣೆ ಮಾಡುವ ಮೂಲಕ ಪ್ರತಿದಿನ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಶನಿವಾರ ರಾತ್ರಿಯೂ ಸುಮಾರು 57 ಮಂದಿ ಗಲಭೆಕೋರರನ್ನ ಬಂಧಿಸಿದ್ದಾರೆ. ಆದ್ದರಿಂದ ಗಲಭೆಕೋರರ ಪೋಷಕರು ಡಿಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ.

ನಮ್ಮ ಮಕ್ಕಳು ಗಲಾಟೆ ನಡೆದ ದಿನ ಇರಲಿಲ್ಲ. ಕೆಲಸ ಮುಗಿಸಿ ಬಂದು ಮಕ್ಕಳು ಮಲಗಿದ್ದರು. ಆದರೆ ಪೊಲೀಸರು ಮಧ್ಯರಾತ್ರಿ ಬಂದು ಮಲಗಿದ್ದವರನ್ನು ಕರೆದುಕೊಂಡು ಬಂದಿದ್ದಾರೆ. ಅವರನ್ನು ನೋಡಲು, ಮಾತನಾಡಲು ಬಿಡುತ್ತಿಲ್ಲ. ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರನ್ನ ಬಿಟ್ಟು ಬಿಡಿ ಎಂದು ಸ್ಟೇಷನ್ ಮುಂದೆ ಪೋಷಕರು ಕಣ್ಣೀರು ಹಾಕಿದ್ದಾರೆ.

ಪೋಷಕರನ್ನ ಠಾಣೆ ಮುಂದೆ ಜಮಾಯಿಸದಂತೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಗಲಭೆ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಇರುವ ಹಿನ್ನಲೆಯಲ್ಲಿ ಯಾವುದೇ ಗುಂಪು, ಜಮಾವಣೆ ಮಾಡದಂತೆ ಪೋಷಕರನ್ನ ವಾಪಸ್ ಕಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರತಿ ದಿನ ಸ್ಟೇಷನ್ ಮುಂದೆ ಪೋಷಕರು ಬರುತ್ತಿದ್ದಾರೆ.

ಇತ್ತ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಡಿಜೆ ಹಳ್ಳಿ ಪೊಲೀಸರು ಗಲಭೆ ಆರೋಪಿಗಳನ್ನ ಬಂಧಿಸಿದ್ದರು. ಕೆಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಠಾಣೆ ಆವರಣ, ಒಳಗೆ, ಮುಂಭಾಗ ಸ್ಯಾನಿಟೈಸ್ ಮಾಡಲಾಗುತ್ತಿದೆ.

Bangalore Hot News