ಶಾಸಕ ಅಖಂಡ  ಶ್ರೀನಿವಾಸ ಮೂರ್ತಿ ಬಿಜೆಪಿ ಸೇರ್ತಾರೆ ಸುದ್ದಿಗೆ ಸಿಕ್ತು ಸ್ಪಷ್ಟನೆ

Akhanda Srinivas Murthy

ಬೆಂಗಳೂರು, (ಆ.16): ಡಿಜೆ ಹಳ್ಳಿ ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರುತ್ತಾರೆ ಅನ್ನೋ ಸುದ್ದಿ ಹಬ್ಬಿದೆ.ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮೇಲಿನ ರಾಜಕೀಯ ದ್ವೇಷದಿಂದ ಎಸ್'ಡಿಪಿಐ ಜೊತೆಗೆ ಕೈಜೋಡಿಸಿ ಕೆಲವರು ದಾಳಿ ನಡೆಸಿರುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್ ನಾಯಕರಾಗಿದ್ದ ಶ್ರೀನಿವಾಸ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನಂತೆ 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2018ರಲ್ಲಿ ಜೆಡಿಎಸ್ ಟಿಕೆಟ್ ಪಡೆದು ಪ್ರತಿ ಸ್ಪರ್ಧಿಯಾಗಿದ್ದ ಪ್ರಸನ್ನ ಕುಮಾರ್ ಅವರನ್ನು ಸೋಲಿಸಿದ್ದರು.
ಇದೀಗ ಗಲಭೆಯಲ್ಲಿ ಮನೆ ಕಳೆದುಕೊಂಡರೂ ಕಾಂಗ್ರೆಸ್ ಅಖಂಡ ಶ್ರೀನಿವಾಸ ಮೂರ್ತಿ ಅವರ ಬೆಂಬಲಕ್ಕೆ ನಿಂತಿಲ್ಲ. ಇದರಿಂದ ಶ್ರೀನಿವಾಸ ಮೂರ್ತಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸ್ಪಷ್ಟನೆ ಕೊಟ್ಟ ಅಖಂಡ

ಬಿಜೆಪಿ ಸೇರುತ್ತಾರೆ ಅನ್ನೋ ಸುದ್ದಿಗಳಿಗೆ ಅಖಂಡ ಶ್ರೀನಿವಾಸ ಮೂರ್ತಿ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್‌ನಲ್ಲಿ ಇದ್ದೇನೆ, ಕಾಂಗ್ರೆಸ್‌ನಲ್ಲಿಯೇ ಇರ್ತೇನೆ ಎಂದಿದ್ದಾರೆ.

ಗಲಭೆಯ ಪ್ರಕರಣದಿಂದ ಬೇಸರಗೊಂಡ ಶಾಸಕ ಶ್ರೀನಿವಾಸ ಮೂರ್ತಿ, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವುದಿಲ್ಲ. ಬಿಜೆಪಿ ಸೇರುವುದಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ಘಟನೆಯ ಬಗ್ಗೆ ಪ್ರತಿಕ್ರಿಯೆಸಿದ ಶಾಸಕರು, ನಾನು ಎಲ್ಲರೊಂದಿಗೆ ಚೆನ್ನಾಗಿದ್ದೇನೆ. ನನ್ನ ಮನೆಯನ್ನೆ ಸುಡುವ ದ್ವೇಷವೇನಿತ್ತು? ನನ್ನ ಪರಿಸ್ಥಿತಿಯೇ ಹೀಗಿದ್ದರೆ ಜನ ಸಾಮಾನ್ಯರ ಗತಿಯೇನು? ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

Bangalore Hot News