ಒಂದೇ ದಿನದಲ್ಲಿ 11 ಜನ ಕೋವಿಡ್-19 ಪಾಸಿಟಿವ್ ಪ್ರಕರಣಗಳು !



Y S Patil DC



ವಿಜಯಪುರ :

ಜಿಲ್ಲೆಗೆ ವಿದೇಶ ಮತ್ತು ಇತರ ಭಾಗಗಳಿಂದ ಒಟ್ಟು 1274 ಜನರು ಈವರೆಗೆ ಆಗಮಿಸಿದ್ದು, ಈ ಪೈಕಿ 605 ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 32 ಜನ ಕೋವಿಡ್-19 ಪಾಸಿಟಿವ್ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಈವರೆಗೆ ಒಟ್ಟು 917 ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.605 ಜನರ ವರದಿ ನೆಗೆಟಿವ್ ಹಾಗೂ 32 ಜನರ ವರದಿ ಪಾಸಿಟಿವ್ ಬಂದಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 280 ಜನರ ವರದಿ ಇನ್ನೂ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 345 ಜನರು ಹೋಮ್‍ಕ್ವಾರಂಟೈನ್‍ದಲ್ಲಿದ್ದರು, ಇದರಲ್ಲಿ 45 ಜನರನ್ನು ಇಂದು ಬಿಡುಗಡೆಗೊಳಿಸಲಾಗಿದೆ, ಇಂದು ಒಂದೇ ದಿನದಲ್ಲಿ 11 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಈವರೆಗೆ ಬಂದಿರುವ ಪಾಸಿಟಿವ್ ಕೋವಿಡ್-19 ರೋಗಿಗಳು ಒಟ್ಟು ಆರು ಕುಟುಂಬಗಳಲ್ಲಿ ಕಂಡುಬಂದಿದ್ದು, ಈವೆರೆಗೆ ನಡೆಸಲಾದ ತನಿಖೆಯಲ್ಲಿ ರೋಗಿ ಸಂಖ್ಯೆ 221 ಕ್ಕೆ 12 ಜನರು, ರೋಗಿ ಸಂಖ್ಯೆ 228 ಗೆ 7 ಜನರು, ರೋಗಿ ಸಂಖ್ಯೆ 362 ಗೆ 09 ಜನರು ಹಾಗೂ ರೋಗಿ 306 ಗೆ 2 ಜನರು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವ ಬಗ್ಗೆ ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಎಲ್ಲ ರೋಗಿಗಳು ಕಂಟೇನ್ಮೆಂಟ್ ವ್ಯಾಪ್ತಿಯ ಕುಟುಂಬಗಳಲ್ಲಿ ಕಂಡುಬಂದಿದ್ದರಿಂದ ಸದ್ಯಕ್ಕೆ ಯಾವುದೇ ಆತಂಕ ಇಲ್ಲದಿದ್ದರೂ ಇನ್ನೂ ಹೆಚ್ಚಿನ ನಿಗಾ ಮತ್ತು ತನಿಖೆ ನಡೆಸಲಾಗುತ್ತಿದ್ದು, ಈ ವಲಯದಲ್ಲಿರುವ ಜನರು ಮನೆಯಿಂದ ಹೊರೆಗೆ ಬರದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ತಿಳಿಸಿದ ಅವರು ಸರ್ಕಾರದ ನಿರ್ದೇಶನದಂತೆ ಕ್ವಾರಂಟೈನ್ ನಿಯಮಗಳನ್ನು ಪಾಲಿಸುವ ಜೊತೆಗೆ ಮಾನವೀಯತೆಯ ನೆಲೆಯ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾನ್ಸರ್, ಡಯಾಲಿಸಿಸ್, ಗರ್ಭಿಣಿ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇದಕ್ಕೆ ತಪ್ಪಿದಲ್ಲಿ ಅಂತಹವರ ವಿರುದ್ಧ ಪ್ರಾಕೃತಿಕ ವಿಪತ್ತು ಕಾಯ್ದೆ 2005ರನ್ವಯ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.



Bangalore Hot News