ಕೊರೊನಾ ಒಂದೂ ಪ್ರಕರಣ ವರದಿಯಾಗದಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಿ: ಸಚಿವ ಬಿ.ಎ.ಬಸವರಾಜಬಿ.ಎ.ಬಸವರಾಜದಾವಣಗೆರೆ.

ಕೋವಿಡ್ 19 ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನೂ ಹೆಚ್ಚಿನದಾಗಿ ಕೆಲಸವನ್ನು ನಿರ್ವಹಿಸಬೇಕು. ಮತ್ತು ಕೊರೊನಾ ಹೊಸ ಪ್ರಕರಣಗಳು ದಾಖಲಾಗದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇನ್ನು ಮುಂದೆಯೂ ಒಂದೂ ಪ್ರಕರಣ ದಾಖಲಾಗದಂತೆ ಕಾರ್ಯವನ್ನು ನಿರ್ವಹಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ್ ಸೂಚನೆಯನ್ನು ನೀಡಿದರು.

ಇಂದು ಕೋವಿಡ್-19 ವೈರಾಣು ನಿಯಂತ್ರಣ ಕುರಿತು ಚನ್ನಗಿರಿ ತಾಲ್ಲೂಕಿನ ಜವಳಿ ಸಮುದಾಯ ಭವನಲ್ಲಿ ಆಯೋಜಿಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿ, ಸಾರ್ವಜನಿಕರು ವೈದ್ಯರೊಂದಿಗೆ ಮತ್ತು ಆಶಾ ಕಾರ್ಯಕರ್ತರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮ ಆರೋಗ್ಯಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ ಹಾಗೂ ಗುಂಪುಗಳ ಮೂಲಕ ಸಂಘರ್ಷಣೆಯನ್ನು ಮಾಡಬಾರದು ಎಂದು ತಿಳಿಸಿದರು.

ಚನ್ನಗಿರಿ ತಾಲ್ಲೂಕು ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕೋವಿಡ್-19 ವೈರಾಣು ನಿಯಂತ್ರಣ ತುರ್ತು ನಿರ್ವಹಣೆಗಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ ಮತ್ತು 7 ಜನರ ಕೋರ್ ಕಮಿಟಿಯನ್ನು ರಚಿಸಲಾಗಿದೆ. ಅಗತ್ಯ ಆಹಾರ ಪದಾರ್ಥಗಳ ಸರಬರಾಜು ಮಾಡಲು 3 ಜನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಗತ್ಯ ವಸ್ತಗಳ ಸರಬರಾಜಿಗೆ 15 ವಾಹನಗಳಿಗೆ ಅನುಮತಿಯನ್ನು ನೀಡಲಾಗಿದೆ ಹಾಗೂ ಚನ್ನಗಿರಿ ತಾಲ್ಲೂಕಿಗೆ ಹೊರದೇಶದಿಂದ 27, ಹೊರರಾಜ್ಯದಿಂದ 242, ಹೊರಜಿಲ್ಲೆಗಳಿಂದ 8818 ಒಟ್ಟು 9087 ಇದ್ದು, ಇವರ ಪೈಕಿ ಹೊರದೇಶದಿಂದ ಬಂದ ಒಟ್ಟು 27 ಜನರನ್ನು ಕ್ವಾರೈಂಟನ್ ಮಾಡಲಾಗಿದ್ದು ಇವರ ಕ್ವಾರೆಂಟೈನ್ ಅವಧಿ ಮುಕ್ತಾಯಗೊಂಡಿದೆ. ಕೋವಿಡ್-19 ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಒಂದು ಖಾಸಗಿ ಆಸ್ಪತ್ರೆ ಮತ್ತು ಐಸೋಲೇಷನ್ ಕೇಂದ್ರವನ್ನು ತೆರೆಯಲಾಗಿದೆ. ತಾಲ್ಲೂಕು ಗಡಿಯಲ್ಲಿ 4 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

ತಾಲ್ಲೂಕಿನಲ್ಲಿ 118 ನ್ಯಾಂಯಬೆಲೆ ಅಂಗಡಿಗಳಿದ್ದು, 9840 ಅಂತ್ಯೋದಯ, 72506 ಬಿ.ಪಿ.ಎಲ್, 1026 ಎ.ಪಿ.ಎಲ್. ಪಡಿತರ ಚೀಟಿಯನ್ನು ಹೊಂದಿದ್ದಾರೆ. ಏಪ್ರಿಲ್ ಯಿಂದ ಮೇ ವರೆಗೆ ಪಡಿತರವನ್ನು ನೀಡಲಾಗಿದೆ ಮತ್ತು ಪಿಂಚಣಿ ವೃದ್ಯಾಪ್ಯ ವೇತನವನ್ನು ನೀಡಲಾಗಿತ್ತಿದೆ. ತಾಲ್ಲೂಕಿನಲ್ಲಿ 10 ಜನ ಉತ್ತರ ಪ್ರದೇಶದವರು, ರಾಯಚೂರು 7 ಜನ ಒಟ್ಟು 17 ಜನ ಕಟ್ಟಡ ಕಾರ್ಮಿಕರು ವಲಸೆ ಬಂದಿದ್ದಾರೆ ಇವರಿಗೆ ಆಹಾರ ಕಿಟ್‍ಗಳು, ಆರೋಗ್ಯ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಂಸದರಾದ ಜಿ.ಎಂ. ಸಿದೇಶ್ವರ ಮಾತನಾಡಿ, ವಿಶೇಷ ಎಂದರೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿಯೂ ಕೊರೋನಾ ಬಂದಿಲ್ಲ. ಆ ಭಾಗದಲ್ಲಿನ ಶಾಸಕರು, ಅಧಿಕಾರಿಗಳು ವಿಶೇಷವಾಗಿ ಶ್ರಮ ವಹಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಎಲ್ಲೆಡೆ ಸಂಚರಿಸಿ ಮತ್ತು ಅಧಿಕಾರಿಗಳ ಹಗಲಿರುಳು ಕೆಲಸದಿಂದಾಗಿ ನಮ್ಮ ಜಿಲ್ಲೆಯು ಇನ್ನೆರಡು ದಿನಗಳಲ್ಲಿ ಹಸಿರು ವಲಯಕ್ಕೆ(ಗ್ರೀನ್ ಝೋನ್) ಬರಲಿದೆ ಎಂದು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ಜಿಲ್ಲೆಯು ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುವ ಈ ಜಿಲ್ಲೆಯಾಗಿದೆ ಅದರಿಂದ ಮೇಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯುವಂತೆ ಮನವಿ ಮಾಡಿದರು.

ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಕೊರೋನಾ ಒಂದು ಮಾರಕ ಸೋಂಕಾಗಿದ್ದು, ಪ್ರಪಂಚದ ಎಲ್ಲ ದೇಶಗಳಲ್ಲಿ ವ್ಯಾಪಿಸಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇದಕ್ಕೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಈ ಕಾರಣದಿಂದ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ನಿಯಂತ್ರಣ ಸಾಧಿಸಬೇಕು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಒಟ್ಟು 74162 ಹೆಕ್ಟೆರ್ ತೋಟಗಾರಿಕೆ ಪ್ರದೇಶವನ್ನು ಹೊಂದಿದ್ದು, ಪ್ರಮುಖವಾಗಿ ಅಡಿಕೆ ಬೆಳೆಯು ಹಾಗೂ ಟೊಮ್ಯಾಟೊ ಮತ್ತು ಬಾಳೆ ಬಾಳೆಯನ್ನು ಬೆಳಯಲಾಗುತ್ತಿದ್ದು ಎಂದು ತಿಳಿಸಿದರು.

ಡಿ.ವೈ.ಎಸ್.ಪಿ ಪ್ರಶಾಂತ ಮನ್ನೋಳ್ ಮಾತನಾಡಿ, ತಾಲ್ಲೂಕಿನ ಮೂರು ಕಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಮತ್ತು ಮದ್ಯಕ್ಕೆ ಸಂಬಂಧಿಸಿದಂತೆ 20 ಪ್ರಕರಣಗಳು ಹಾಗೂ 6 ಜೂಜಾಟ ಪ್ರಕರಣಗಳು ದಾಖಲಿಸಲಾಗಿದೆ ಮತ್ತು ದುರ್ಗ ಪಡೆ ಮತ್ತು ಕಮಾಂಡರ್ ಪಡೆಯು ಕಾರ್ಯದಲ್ಲಿ ತೊಡಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಆಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ., ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಡಿಹೆಚ್‍ಓ ಡಾ. ರಾಘವೇಂದ್ರ ಸ್ವಾಮಿ ಇತರೆ ಅಧಿಕಾರಿಗಳು ಹಾಜರಿದ್ದರು.


Bangalore Hot News