ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲ್ಲೂಕಿಗೆ ೫೦ಲಕ್ಷ ರೂ.


K. S. Eshwarappa



ತುಮಕೂರು

ಸರ್ಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ಬರಪೀಡಿತ ತಾಲ್ಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲ್ಲೂಕಿಗೆ ೫೦ಲಕ್ಷ ರೂ. ಗಳಿಗೆ ಮಂಜೂರಾತಿ ನೀಡಿದ್ದು, ಈ ಹಣದ ಸಂಪೂರ್ಣ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ತುರ್ತಾಗಿ ಕಾರ್ಯಗತಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ಸಮಿತಿಯ ಸಭೆಯನ್ನು ಆಯಾ ಕ್ಷೇತ್ರಗಳಲ್ಲಿ ನಡೆಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಸಲಹೆ ಮಾಡಿದರು.


K. S. Eshwarappa


ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ತುಮಕೂರು ಜಿಲ್ಲೆಯ ೭ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವುದರಿಂದ ಇವುಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಇದರ ಸಂಪೂರ್ಣ ಬಳಕೆಗೆ ಅಧಿಕಾರಿಗಳು ಗಮನಹರಿಸಬೇಕೆಂದು ಅವರು ತಿಳಿಸಿದರು.

ತುಮಕೂರು ಕ್ಷೇತ್ರದ ಸಂಸದರಾದ ಜಿ.ಎಸ್.ಬಸವರಾಜು ಅವರು ಮಾತನಾಡಿ, ತುಮಕೂರು ಜಿಲ್ಲೆ ಕುಡಿಯುವ ನೀರಿನ ಬಗ್ಗೆ ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಖಾಸಗಿ ಬೋರ್‌ವೆಲ್‌ಗಳಿಂದ ನೀರನ್ನು ಪಡೆದು ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಿಗೆ ಪ್ರತಿ ತಾಲ್ಲೂಕಿಗೆ ೨ ಕೋಟಿ ರೂ. ಅನುದಾನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಈ ವಿಷಯದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

K. S. Eshwarappa


ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಡಾ: ರವಿಶಂಕರ್ ಗುರೂಜಿ ಅವರ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಯೋಜನೆಯೊಂದಿಗೆ ಎಂಓಯು ಟೈಅಪ್ ಮಾಡಿಕೊಳ್ಳುತ್ತಿದ್ದು, ರಾಜ್ಯದ ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ೯ ಜಿಲ್ಲೆಗಳ ಅಂತರ್ಜಲ ಹೆಚ್ಚಿಸಲು ಅಂತರ್ಜಲ ಚೇತನ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬರುವ ಮೇ ೫ ರಂದು ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಸಮಗ್ರ ಅಂತರ್ಜಲ ಅಭಿವೃದ್ಧಿಯ ಬಗ್ಗೆ ಕಾರ್ಯಯೋಜನೆ ರೂಪಿಸುವವರಿದ್ದು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುವಂತೆ ಸಚಿವರು ತಿಳಿಸಿದರು.

ಈ ಕಾಮಗಾರಿಗಳನ್ನು ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಈ ವಿಶೇಷ ಯೋಜನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ಕೈಜೋಡಿಸಿ ಕ್ರಿಯಾ ಯೋಜನೆ ರೂಪಿಸಿ ಅವುಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳುವ ಕಾರ್ಯ ಆಗಬೇಕೆಂದು ಸಚಿವರು ತಿಳಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೋವಿಡ್-೧೯ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮನೆಯಲ್ಲಿಯೇ ಉಳಿದಿದ್ದು, ಕೆಲಸವಿಲ್ಲದೆ ಮನೆಯಲ್ಲಿ ಪರಿತಪಿಸುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ೩೦ ದಿನಗಳ ಕೂಲಿಯನ್ನು ನಿರುದ್ಯೋಗಿಗಳಿಗೆ ಭತ್ಯೆಯನ್ನು ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ಇದು ಸರ್ಕಾರದಿಂದಾಗಬೇಕೆಂದು ಅವರು ಸಚಿವರಲ್ಲಿ ಮನವಿ ಮಾಡಿದರು.

ಕೊರೋನಾ ವೈರಸ್ ಹರಡುವ ಭಯದಲ್ಲಿ ಕೂಲಿ ಕಾರ್ಮಿಕರು ಮನೆ ಬಿಟ್ಟು ಹೊರಗೆ ಬಂದಿರುವುದಿಲ್ಲ. ಆದರೆ ರಾಜ್ಯದ ಬಹುತೇಕ ಗ್ರಾಮೀಣ ಭಾಗಗಳು ಗ್ರೀನ್ ಜೋನ್‌ನಲ್ಲಿ ಬರುವುದರಿಂದ ಅಲ್ಲಿಯ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿಯಲ್ಲಿ ಸರ್ಕಾರದಿಂದ ಕೈಗೊಳ್ಳುವ ಕಾಮಗಾರಿಗಳು ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಲು ಭಯ ಬಿಟ್ಟು ಮುಂದೆ ಬರಬೇಕೆಂದು ಸಚಿವರು ಕರೆ ನೀಡಿದರು.

ನರೇಗಾ ಯೋಜನೆಯಡಿಯಲ್ಲಿ ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ, ಪಶುಸಂಗೋಪನೆ, ರೇಷ್ಮೆ, ಪಂಚಾಯತ್ ರಾಜ್ ಹಾಗೂ ಇನ್ನಿತರೆ ಇಲಾಖೆಗಳಿಗೆ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದ್ದು, ೧೦ಲಕ್ಷದವರೆಗಿನ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆ ಪಡೆದು ಆಯಾ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಕಾಮಗಾರಿಯನ್ನು ಕೈಗೊಳ್ಳಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ವಿಳಂಬ ಮಾಡದೆ ಕಾರ್ಯಪ್ರವೃತ್ತರಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತಿಖ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

K. S. Eshwarappa

ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲೆಯಲ್ಲಿ ೧೪೯೫ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಏಜೆನ್ಸಿಗಳಿಂದ ನಿರ್ವಹಣೆ ಇಲ್ಲದೆ ಸಾಕಷ್ಟು ಸ್ಥಗಿತಗೊಂಡಿವೆ ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳು ಪ್ರತಿ ಘಟಕಕ್ಕೆ ಭೇಟಿ ನೀಡಿ ಅವುಗಳ ಸ್ಥಿತಿಗತಿಗಳ ಬಗ್ಗೆ ಮುಂದಿನ ಸಭೆಯಲ್ಲಿ ನಿಖರವಾದ ಮಾಹಿತಿಯನ್ನು ನೀಡಬೇಕೆಂದು ಸಚಿವರು ತಾಕೀತು ಮಾಡಿದರು.

ಮುಂದಿನ ಬಾರಿ ಜಿಲ್ಲೆಯಲ್ಲಿ ಸಭೆ ನಡೆಯುವ ಹೊತ್ತಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಮತ್ತು ಕಾರ್ಯ ನಿರ್ವಹಣೆ ಬಗ್ಗೆ ಸರಿಯಾದ ವರದಿಯನ್ನು ನೀಡುವಂತೆ ಸಚಿವರು ತಿಳಿಸಿದರು.

ಆಯಾ ಕ್ಷೇತ್ರಗಳ ಶಾಸಕರುಗಳು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಜವಾಬ್ದಾರಿಯನ್ನು ಪಡೆದು ಸೂಕ್ತ ರೀತಿಯಲ್ಲಿ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡುವ ಕಾರ್ಯ ಆಗಬೇಕಾಗಿದೆ ಎಂದು ಸಚಿವರು ಶಾಸಕರುಗಳಿಗೆ ತಿಳಿಸಿದರು.

K. S. Eshwarappa

ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಕುರಿತಂತೆ ತಿಪಟೂರು ತಾಲ್ಲೂಕನ್ನು ಮಾದರಿಯಾಗಿ ತೆಗೆದುಕೊಂಡು, ಅಲ್ಲಿ ಪರಿಣಾಮಕಾರಿ ನಿರ್ವಹಣೆಯನ್ನು ಆಧರಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ವಿಸ್ತರಿಸಲಾಗುವುದು. ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸುವಂತೆ ಶಾಸಕ ನಾಗೇಶ್ ಅವರಿಗೆ ಸಚಿವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕರುಗಳಾದ ಜ್ಯೋತಿಗಣೇಶ್, ಬಿ.ನಾಗೇಶ್, ಜಯರಾಂ, ಸತ್ಯನಾರಾಯಣ, ವೀರಭದ್ರಯ್ಯ, ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಯ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷಾಧಿಕಾರಿ ಜಯರಾಂ, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಶಿರಾ ತಾಲ್ಲೂಕಿನಲ್ಲಿ ಕೈಗೊಂಡಿರುವ ನರೇಗಾ ಯೋಜನೆಯ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು.



Bangalore Hot News