ದುಪ್ಪಟ್ಟು ಬೆಲೆಗೆ ದಿನಸಿ ಮಾರಾಟ ಮಾಡಿದ 5 ಅಂಗಡಿಗಳಿಗೆ ವಿರುದ್ಧ ಪ್ರಕರಣ ದಾಖಲು



general store


ಬಳ್ಳಾರಿ/ಹೊಸಪೇಟೆ:

ಕೋವಿಡ್ 19 ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶವಿದ್ದು ಇದರ ನಡುವೆ ಹೆಚ್ಚಿನ ಲಾಭ ಗಳಿಸುವ ಕಾರಣದಿಂದ ಕೆಲ ದಿನಸಿ ವರ್ತಕರು ಹೆಚ್ಚಿನ ಬೆಲೆಯನ್ನು ನಿಗದಿಪಡಿಸುತ್ತಿರುವುದು ಕಂಡುಬರುತ್ತಿದ್ದು, ನಗರದಲ್ಲಿನ ಅಂತಹ ಕೆಲ ದಿನಸಿ ಅಂಗಡಿಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊಸಪೇಟೆಯ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು.

ದಿನಸಿ ಸಾಮಾಗ್ರಿಗಳಿಗೆ ದುಪ್ಪಟ್ಟು ಬೆಲೆ ವಿಧಿಸಿ ಕೆಲ ಕಿರಾಣಿ ಅಂಗಡಿಗಳು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಅಂತಹ ಅಂಗಡಿಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿ ಪಂಚನಾಮೆಯನ್ನು ಮಾಡಲಾಗಿದೆ. ಪ್ರಸ್ತುತ ನಗರದ 5 ಕಿರಾಣಿ ಅಂಗಡಿಗಳಿಗೆ ದಾಳಿ ನಡೆಸಲಾಗಿದ್ದು ಇನ್ನೂ ಹಲವು ಅಂಗಡಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ ದರ ಹೆಚ್ಚಿಸಿ ದಿನಸಿ ಮಾರಾಟ ಮಾಡುವುದು ಕಂಡುಬAದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಮಯ ನಿಗದಿಪಡಿಸಲಾಗಿದ್ದು ನಿಗದಿತ ಸಮಯಕ್ಕೂ ಮೀರಿ ಓಡಾಡಿದರೇ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ;ಈಗಾಗಲೇ ಸಮಯ ಮೀರಿ ತೆರೆದಿಟ್ಟಿದ್ದ ಕೆಲ ಹಾರ್ಡ್ ವೇರ್ ಹಾಗೂ ಎಲೆಕ್ಟ್ರಿಕಲ್ ಅಂಗಡಿಗಳನ್ನು ಮುಟ್ಟುಗೋಲುಪಡಿಸಲಾಗಿದೆ. ಏ.21ರಂದು ರಾಜ್ಯಸರ್ಕಾರ ಹೊಸ ನಿಯಮಗಳನ್ನು ಜಾರಿಪಡಿಸಲಿದ್ದು ಅವುಗಳನ್ನು ಗಮನದಲ್ಲಿಟ್ಟುಕೊಂಡು ಏ.22ಕ್ಕೆ ನಗರಕ್ಕೆ ಒಗ್ಗುವಂತೆ ಹೊಸ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ನAತರ ತಹಶೀಲ್ದಾರ್ ವಿಶ್ವನಾಥ್ ಅವರು ಮಾತನಾಡಿ ದರ ಹೆಚ್ಚಿಸಿ ವ್ಯಾಪಾರ ಮಾಡುವ ಅಂಗಡಿಗಳ ಮಾಹಿತಿ ಪಡೆದು ಪ್ರತಿದಿನ ದಾಳಿ ನಡೆಸುತ್ತಿದ್ದೇವೆ;ಅದೇ ರೀತಿಯಾಗಿ ಕೆಲ ಹೋಲ್ ಸೇಲ್ ಅಂಗಡಿಗಳು ಸಹ ಅಗತ್ಯ ದಿನಸಿಗಳ ಕೃತಕ ಅಭಾವವನ್ನು ಸೃಷ್ಠಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಶೇ.96 ಪಡಿತರವನ್ನು ವಿತರಿಸಲಾಗಿದ್ದು ಅದೇ ರೀತಿಯಾಗಿ ತಾಲೂಕಿನ ದಾನಿಗಳು ನೆರವಿಗೆ ಬಂದು ನೀಡಿದ 6 ಸಾವಿರದಷ್ಟು ಪಡಿತರ ಕಿಟ್ ಗಳನ್ನು ಅಗತ್ಯವುಳ್ಳವರಿಗೆ ನೀಡಲಾಗಿದೆ. ಮುಂದಿನ ತಿಂಗಳಲ್ಲಿ ಕೇಂದ್ರಸರ್ಕಾರದಿAದ ಎರಡು ತಿಂಗಳಿನ ಪಡಿತರ ಬರುತ್ತದೆ;ಅದನ್ನು ಮೇ 1ರಿಂದ ಪಡಿತರ ಗ್ರಾಹಕರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ವಿ.ರಘುಕುಮಾರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಇದ್ದರು.


Bangalore Hot News