ಸೀಲ್‍ಡೌನ್ ಹಾಗೂ ಕಂಟೈನ್ಮೆಂಟ್ ಏರಿಯಾಗಳಲ್ಲಿ 108 ಆಂಬುಲೆನ್ಸ್ ಬಳಸಿ ಜ್ವರ ತಪಾಸಣೆ-ಬಿ. ಶ್ರೀರಾಮುಲು
ಚಿತ್ರದುರ್ಗ ಏ. 28 :
ಕೋವಿಡ್-19 ಸೋಂಕು ಮುಕ್ತ ರಾಜ್ಯವನ್ನಾಗಿಸಲು ರಾಜ್ಯದ ಡೇಂಜರ್ ಜೋನ್ ಹಾಗೂ ಕಂಟೈನ್ಮೆಂಟ್ ಏರಿಯಾಗಳಲ್ಲಿ 108 ಆ್ಯಂಬುಲೆನ್ಸ್ ಬಳಸಿಕೊಂಡು, ಫೀವರ್ ಕ್ಲಿನಿಕ್‍ಗಳಲ್ಲಿ ಜ್ವರ ತಪಾಸಣೆ ಮಾಡಲು ಯೋಜಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರು ಹೇಳಿದರು.
ಮೊಳಕಾಲ್ಮೂರು ಪಟ್ಟಣದ ಪಟ್ಟಣ ಪಂಚಾಯತ್ ಕಚೇರಿ ಆವರಣದಲ್ಲಿ ಮಂಗಳವಾರದಂದು ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ನಿತ್ಯ ಬಳಕೆಯ ದಿನಸಿ ಸಾಮಗ್ರಿ ಕಿಟ್ ವಿತರಿಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಲಾಕ್‍ಡೌನ್ ಅವಧಿಯನ್ನು ವಿಸ್ತರಣೆ ಮಾಡಬೇಕೋ, ಸಡಿಲಿಕೆ ಮಾಡಬೇಕೋ ಎನ್ನುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ಸರ್ಕಾರದ ನಿರ್ಧಾರವನ್ನು ಗಮನಿಸಿದ ಬಳಿಕವೇ ಮೇ. 03 ರ ಬಳಿಕ ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆ ಅಥವಾ ಸಡಿಲಿಕೆ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು. ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೇ. 03 ರವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಬರುವ ದಿನಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಅಥವಾ ವಿಸ್ತರಣೆ ಮಾಡುವ ಕುರಿತಂತೆ ಪ್ರಧಾನಮಂತ್ರಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಈಗಾಗಲೆ ಸಂವಾದ ನಡೆಸಿ, ಅಭಿಪ್ರಾಯಗಳನ್ನು ಆಲಿಸಿದ್ದಾರೆ. ಇದಲ್ಲದೆ ಮುಖ್ಯಮಂತ್ರಿಗಳೂ ಕೂಡ ಎಲ್ಲ ಜಿಲ್ಲಾಧಿಕಾರಿಗಳೊಂದಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಸೀಲ್‍ಡೌನ್ ಮಾಡಿರುವ ಹಾಗೂ ಕಂಟೈನ್ಮೆಂಟ್ ಪ್ರದೇಶವೆಂದು ಗುರುತಿಸಲಾಗಿರುವ ಕಡೆಗಳಲ್ಲಿ ಎಲ್ಲರಿಗೂ ಜ್ವರ ತಪಾಸಣೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 108 ಆ್ಯಂಬುಲೆನ್ಸ್ ಬಳಕೆ ಮಾಡಲಾಗುವುದು. ಈಗಾಗಲೆ ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಹಾಗೂ ಅಪಾಯದ ತೀವ್ರತೆಯನ್ನು ಗಮನಿಸಿ, ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನಾಗಿ ಜಿಲ್ಲೆಗಳನ್ನು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಈಗಾಗಲೆ ಹಸಿರು ವಲಯಕ್ಕೆ ಸೇರ್ಪಡೆಗೊಂಡಿದೆ. ಹಾಟ್‍ಸ್ಪಾಟ್ ಪ್ರದೇಶದಲ್ಲಿ ಲಾಕ್‍ಡೌನ್ ವಿಸ್ತರಿಸುವ ಅನಿವಾರ್ಯತೆ ಇದೆ. ಉಳಿದೆಡೆ ಈಗಾಗಲೆ ಸಣ್ಣಪುಟ್ಟ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ರಾಜ್ಯದಲ್ಲಿ ಯಾವುದೇ ಅಡ್ಡಿ ಇಲ್ಲ. ರೈತರು ತಮ್ಮ ಬೆಳೆಗಳನ್ನು ಎಲ್ಲಿಗೆ ಬೇಕಾದರೂ ಸಾಗಿಸಿ ಮಾರಾಟ ಮಾಡಲು ಯಾವುದೇ ಅಡೆತಡೆ ಇಲ್ಲ. ಆಶಾ ಕಾರ್ಯಕರ್ತೆಯರು ಅಥವಾ ವೈದ್ಯರ ಮೇಲೆ ಹಲ್ಲೆ ಮಾಡಿದಲ್ಲಿ ಅಂತಹವರಿಗೆ 2 ಲಕ್ಷ ರೂ. ದಂಡ, 2 ವರ್ಷ ಜೈಲು ಶಿಕ್ಷೆ ನೀಡಬಹುದಾದ ವಿಶೇಷ ಕಾಯ್ದೆ ರೂಪಿಸಲಾಗಿದೆ.
ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರು ಮತ್ತು ಆರೊಗ್ಯ ಇಲಾಖೆ ಸಿಬ್ಬಂದಿಗಳ ಸೇವಾ ವೈಖರಿ ಶ್ಲಾಘನೀಯವಾಗಿದೆ. ಜೀವದ ಹಂಗು ತೊರೆದು ಶ್ರಮ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯ ಸಿಬ್ಬಂದಿಗಳ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಉಳ್ಳವರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಾಡುತ್ತಿರುವ ದಾನ ಧರ್ಮ, ಜಾತಿಯ ಎಲ್ಲೆ ಮೀರಿ ನಡೆದಿರುವುದು ನಮ್ಮ ನಾಡಿನ ಸಂಸ್ಕ0ತಿ ಬಿಂಬಿಸುತ್ತದೆ. ರಾಜ್ಯದಲ್ಲಿ ಲಾಕ್‍ಡೌನ್‍ಗೆ ಸಾರ್ವಜನಿಕರು ನೀಡುತ್ತಿರುವ ಸಹಕಾರ ಅದ್ಭುತವಾಗಿದೆ ಎಂದು ಸಚಿವ ಬಿ. ಶ್ರೀರಾಮುಲು ಅವರು ಹೇಳಿದರು.
ಮೊಳಕಾಲ್ಮೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕಾಂತರಾಜ್, ತಹಸಿಲ್ದಾರ್ ಬಸವರಾಜ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೊಳಕಾಲ್ಮೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕಾಂತರಾಜ್, ತಹಸಿಲ್ದಾರ್ ಬಸವರಾಜ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಚಿವ ಬಿ. ಶ್ರೀರಾಮುಲು ಅವರು ಮೊಳಕಾಲ್ಮೂರು ತಾಲ್ಲೂಕು ರಾಂಪುರ ಹಾಗೂ ನಾಗಸಮುದ್ರ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಕೆಲಸಗಾರರು, ವಿಕಲಚೇತನರಿಗೆ ನಿತ್ಯ ಬಳಕೆಯ ದಿನಸಿ ಸಾಮಗ್ರಿ ಕಿಟ್ ವಿತರಿಸಿದರು. ಅಲ್ಲದೆ ಮೊಳಕಾಲ್ಮೂರು ಪಟ್ಟಣದಿಂದ ಆಂಧ್ರಪ್ರದೇಶ ಗಡಿ ಭಾಗಕ್ಕೆ ಭೇಟಿ ನೀಡಿ ಇಲ್ಲಿ ಅಳವಡಿಸಲಾಗಿರುವ ಸೋಂಕು ನಿವಾರಕ ಮಾರ್ಗವನ್ನು ವೀಕ್ಷಿಸಿದರು.
Bangalore Hot News
0 Comments
Please share your comment