ಅಬಕಾರಿ ಕಾರ್ಯಾಚರಣೆ: 10 ಲೀ. ಸೇಂದಿ ವಶ



ಅಬಕಾರಿ ಕಾರ್ಯಾಚರಣೆ



ಬೆಂಗಳೂರು ಗ್ರಾಮಾಂತರ:

ನೋವೆಲ್ ಕೊರೋನಾ ವೈರಸ್ (ಕೋವಿಡ್-19) ಸೋಂಕು ತಡೆಗಟ್ಟುವ ಹಾಗೂ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರವು ರಾಜ್ಯವನ್ನು ಲಾಕ್‍ಡೌನ್ ಮಾಡಿ ಎಲ್ಲಾ ವಹಿವಾಟನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಮದ್ಯದಂಗಡಿಯನ್ನು ಮೇ 03 ರವರೆಗೆ ಮುಚ್ಚಲು ಆದೇಶಿಸಲಾಗಿದೆ.

ಏಪ್ರಿಲ್ 19 ರಂದು ಸಾರ್ವಜನಿಕರ ಮಾಹಿತಿಯನ್ನಾಧರಿಸಿ ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಗೆದ್ದಲಪಾಳ್ಯದಲ್ಲಿ ಸುಮಾರು 10 ಲೀಟರ್ ಸೇಂದಿಯನ್ನು ವಶಪಡಿಸಿಕೊಂಡು ಮುನಿರಾಜು ಎಂಬ ಆರೋಪಿ ದಸ್ತಗಿರಿಪಡಿಸಿ, ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕರು ಈ ಸಂಬಂಧ ಪ್ರಕರಣ ದಾಖಲಿಸಿರುತ್ತಾರೆ.

ಮಾರ್ಚ್ 24 ರಿಂದ ಏಪ್ರಿಲ್ 19 ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸಿದ ಜಾರಿ ಮತ್ತು ತನಿಖೆ ಚಟುವಟಿಕೆಯ ಕಾರ್ಯಾಚರಣೆಯಿಂದಾಗಿ 225 ದಾಳಿಗಳನ್ನು ನಡೆಸಿ, 05 ಮೊಕದ್ದಮೆಗಳನ್ನು ಪತ್ತೆ ಹಚ್ಚಿ, 12.780 ಲೀಟರ್ ಭಾರತೀಯ ತಯಾರಿಕಾ ಮದ್ಯವನ್ನು ಮತ್ತು 3.250 ಲೀಟರ್ ಬೀರ್ ಅನ್ನು ಜಪ್ತುಪಡಿಸಿ 01 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿರುತ್ತದೆ.

ದೀರ್ಘಾವಧಿಗೆ ಮದ್ಯದ ಅಂಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಗಳು ಇತರೆ ಮಾದಕ ವಸ್ತುಗಳಾದ ರಾಸಾಯನಿಕ ಮಿಶ್ರಿತ ಸೇಂದಿ, ಕಳ್ಳಭಟ್ಟಿ, ನಕಲಿ ಮದ್ಯ, ಗಾಂಜಾ, ಹ್ಯಾಂಡ್ ಸ್ಯಾನಿಟೈಸರ್ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ, ಸಾವು ನೋವು ಸಂಭವಿಸುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಯಾವುದೇ ಅಕ್ರಮ ಮಾರಾಟದ ಬಗ್ಗೆ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ಸಾವು ನೋವು ತಪ್ಪಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಗೆ ಸಹಕರಿಸಬೇಕೆಂದು ಕೋರಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.



Bangalore Hot News